(೦೮೩೬) ೨೪೪೦೨೮೩, ೨೪೩೬೧೭೬ kvvsangha@gmail.com

ಇತಿಹಾಸ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ-೨೦೦೨,

ಕರ್ನಾಟಕ ಏಕೀಕರಣ ಸುವರ್ಣ ಪ್ರಶಸ್ತಿ-೨೦೦೬ ಹಾಗೂ

ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಕೊಡಮಾಡಿದ

ಜಯದೇವಿತಾಯಿ ಲಿಗಾಡೆ ಹೆಸರಿನಲ್ಲಿ ಸ್ಥಾಪಿಸಿರುವ ೨೦೨೧-೨೨ನೇ ಸಾಲಿನ  ಪ್ರಶಸ್ತಿ ಪುರಸ್ಕೃತ

ಕನ್ನಡದ ಗುಡಿ 

ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ

(ಸ್ಥಾಪನೆ : ೨೦ ಜುಲೈ ೧೮೯೦)

 

ಕಳೆದೆರಡು ಶತಮಾನಗಳ ಕರ್ನಾಟಕದ ಇತಿಹಾಸ ಅರಿಯಲೆತ್ನಿಸುವುದು ಹಾಗೂ ಕರ್ನಾಟಕ ವಿದ್ಯಾವರ್ಧಕ ಸಂಘದ ಚರಿತ್ರೆಯನ್ನು ತಿಳಿಯುವುದೆಂದರೆ ಅದು ಕೇವಲ ಭಾಷೆ ಮತ್ತು ಸಂಸ್ಕೃತಿಯ ಮಾತಷ್ಟೇ ಅಲ್ಲ ಎಂಬುದು ಮನನವಾಗುತ್ತದೆ. ಭಾಷೆಯೊಂದರ ಮೂಲಕ ಜನ ವಿರೋಧಿ ನೀತಿಗಳನ್ನು, ಪ್ರತಿಗಾಮಿ ಮೌಲ್ಯಗಳನ್ನು ಹೇರುತ್ತಲೇ ಜನಸಾಮಾನ್ಯನನ್ನು ವಂಚಿಸುತ್ತ ಬಂದ ರಾಜಸತ್ತೆಗಳನ್ನು ಮತ್ತು ಆಡಳಿತಾರೂಢ ವರ್ಗಗಳನ್ನು ಬುಡಮೇಲು ಮಾಡಿ, ಸಮಾನತೆಯ ಆಶಯಗಳು ಈಡೇರಲು ಅನುದಿನ ನಡೆದ, ಅಮೂಲಾಗ್ರ ಬದುಕು ಬದಲಿಸಿದ ಸದ್ದಿರದ ಸಂಘರ್ಷವೊಂದರ ಕಥೆ !

ಆಯಾ ಪ್ರದೇಶದ ಜನಭಾಷೆಯೇ ಸಾರ್ವಭೌಮತ್ವ ಹೊಂದುವ ಮೂಲಕ ಆ ಭಾಷೆಯನ್ನಾಡುವ ಜನತೆಯೇ  ಸಾರ್ವಭೌಮತ್ವ ಪಡೆಯಬೇಕಾದ ಸ್ಥಿತಿಯನ್ನು ಉದ್ದೇಶಪೂರ್ವಕವಾಗಿಯೇ ಜನವಿರೋಧಿ ಶಕ್ತಿಗಳು ಜನರದಲ್ಲದ ಭಾಷೆಯನ್ನು ಹೇರುವ ಮೂಲಕವೇ ಶ್ರೀಸಾಮಾನ್ಯನನ್ನು ಅಧಿಕಾರದ ಮೊಗಸಾಲೆಯಿಂದ ದೂರವಿಡುವ ಪಿತೂರಿಯ ವಿರುದ್ಧದ ಭಾಷೆಯ ಹೆಸರಿನ ಹೋರಾಟ, ಕೇವಲ ಸಾಹಿತ್ಯ, ಸಂಸ್ಕೃತಿಯ ಮಾತಾಗುಳಿದಿರುವುದಿಲ್ಲ. ಅದು ಆ ನೆಲದ ಜನರ ಬದುಕಿನ ಮೂಲ ಸಂಗತಿಯೂ ಆಗಿರುತ್ತದೆ.

ಹೆಚ್ಚು ಕಡಿಮೆ ವಿಜಯನಗರ ಸಾಮ್ರಾಜ್ಯದ ಪತನದೊಂದಿಗೇ ಕನ್ನಡತನದ ದೇಶೀಯ ಸಂಸ್ಕೃತಿಗೆ ಹಿನ್ನೆಡೆಯುಂಟಾಗಿ ನಂತರದ ದಿನಗಳಲ್ಲಿ ಮುಂಬೈ ಕರ್ನಾಟಕ ಆದಿಲ್‌ಶಾಹಿ, ಪೇಶ್ವೆಗಳ ಹಿಡತದಲ್ಲುಳಿದರೆ, ಹೈದರಾಬಾದ್ ಕರ್ನಾಟಕ ನಿಜಾಮ್ ಆಡಳಿತದ ಅಬ್ಬರದ ಉರ್ದು ಭಾಷೆಯ ಹಿಡಿತದಲ್ಲಿ ಸಿಲುಕಿ ಹೋಯಿತು. ತುಸುಮಟ್ಟಿಗೆ ದಕ್ಷಿಣ ಕರ್ನಾಟಕದಲ್ಲಿ ಕನ್ನಡ ಉಸಿರಾಡಿಕೊಂಡಿತ್ತು. ಮದ್ರಾಸ್ ಪ್ರಾಂತದ ಬಳ್ಳಾರಿ ಜಿಲ್ಲೆ, ಕೊಯಂಬತ್ತೂರ ಭಾಗದ ಕೊಳ್ಳೇಗಾಲಗಳಲ್ಲಿ ತೆಲಗು, ತಮಿಳು ಭಾಷೆಗಳು ಹಾವಳಿ ನಡೆಸಿದರೆ, ಕಲ್ಬುರ್ಗಿ, ಬೀದರ್, ರಾಯಚೂರ, ಕೊಪ್ಪಳಗಳು  ತೆಲಗು, ಉರ್ದುವಿನಿಂದಾಗಿ ತತ್ತರಿಸಿಹೋದವು. ಈ ಸನ್ನಿವೇಶದಲ್ಲಿ ಈ ನೆಲದ ಮಗನಾದ ಕನ್ನಡ ಭಾಷಿಕನಿಗೆ ಅಸ್ತಿತ್ವವೇ ಇದ್ದಿರಲಿಲ್ಲ.

ರಾಜಸತ್ತೆಯ, ಅಧಿಕಾರ ಕೇಂದ್ರದ ಕೆಲವೇ ಜನರ ಭಾಷೆಯಾಗಿದ್ದ ಭಾಷೆಗಳೇ ಒತ್ತಾಯಪೂರ್ವಕವಾಗಿ ಸಾಮಾನ್ಯರ ಮೇಲೆ ಹೇರಲ್ಪಟ್ಟು ಬಂಡವಾಳಶಾಹಿಗಳ, ಶೋಷಕರ ಭಾಷೆಯಾಗಿ ಪರಕೀಯವಾದ ಮರಾಠಿಗೆ ಆಡಳಿತ ಭಾಷೆಯ ಸ್ಥಾನಮಾನ ಲಭಿಸಿದರೆ, ಕನ್ನಡ ಜನಭಾಷೆಯಾಗಿತ್ತು. ೧೮೧೮ ರ ಹೊತ್ತಿಗೆ ಬ್ರಿಟಿಷ್ ಅಧಿಪತ್ಯದ  ಜನರಿಗಂತೂ ಮುಂಬೈ ಕರ್ನಾಟಕವೆಂಬುದು ದಕ್ಷಿಣ ಮಹಾರಾಷ್ಟ್ರ. ಆ ಗ್ರಹಿಕೆಯಿಂದಲೇ ಪ್ರಾರಂಭಗೊಂಡ ಮೊದಲ ಶಾಲೆ ಮರಾಠಿ ಶಾಲೆಯಾಗಿತ್ತು !

೧೮ ನೇ ಶತಮಾನದ ಕೊನೆಯ ಭಾಗದಲ್ಲಿ ಕನ್ನಡದ ಪಾಲಿಗೆ ಕವಿದ ಗಾಡಾಂಧಕಾರ ಕಳೆಯುವ ಪ್ರಯತ್ನಗಳು  ನಡೆಯತೊಡಗಿ ಕನ್ನಡವನ್ನುಳಿಸುವ ಜೊತೆಗೆಯೇ ವೈಚಾರಿಕತೆಯನ್ನು ಬಿತ್ತುವ, ಅವೈದಿಕ ವಲಯದಲ್ಲಿನ ಶೈಕ್ಷಣಿಕ ಪ್ರಸಾರದ ಗಮನಾರ್ಹ ಕಾರ್ಯಗಳು ನಡೆಯತೊಡಗಿದವು. ಪ್ರಾಥಮಿಕ ಶಿಕ್ಷಣದಿಂದ ಹಿಡಿದು ಆಡಳಿತ ಭಾಷೆಯಾಗಿಯೂ ಕನ್ನಡ ಭಾಷೆಯ ಪರವಾಗಿ ದಿಟ್ಟ ದನಿ ಮೂಡಿಸಿದ್ದು ಡೆಪ್ಯೂಟಿ ಚೆನ್ನಬಸಪ್ಪ ಹಾಗೂ ರಸೆಲ್ ಜೋಡಿ, ಡೆಪ್ಯೂಟಿ ಚೆನ್ನಬಸಪ್ಪನವರು ಕಟ್ಟಿದ ಬಳಗದ ಹಿರಿಯರಾದ ಗಂಗಾಧರ ತುರಮರಿ, ಶಾಂತವೀರ ಕಿತ್ತೂರ, ರೊದ್ದ ಶ್ರೀನಿವಾಸರಾಯ, ವೆಂಕಟ ರಂಗೋ ಕಟ್ಟಿ, ಹುಯಿಲಗೋಳ ಭುಜಂಗರಾಯರೇ ಮೊದಲಾದವರು ಕನ್ನಡತನದ ಹಿರಿಮೆ ಬಿತ್ತುವ, ಕನ್ನಡಿಗನೆಂಬ ಸ್ವಾಭಿಮಾನ ಬೆಳೆಯುವ ಕಾಯಕದಲ್ಲಿ ತೊಡಗಿದ್ದವರು.

ಸ್ಥಾಪನೆ

ಈ ಎಲ್ಲ ಹಿರಿಯರ ಹೋರಾಟ ನಾಡಿನ ಬಹುತೇಕ ಭಾಗದಲ್ಲಿ ಕನ್ನಡ, ಕನ್ನಡಿಗ, ಕರ್ನಾಟಕತ್ವಕ್ಕಾಗಿ ಶ್ರಮಿಸುವ, ಸಂಘಟಿತರಾಗುವ ಪ್ರಯತ್ನಗಳು ನಡೆದವು, ಆ ಪ್ರಯತ್ನದ ಪ್ರಮುಖ ಹಾಗೂ ಐತಿಹಾಸಿಕ ಕಾರ್ಯ ೧೮೯೦, ಜುಲೈ ೨೦ ರಂದು ಧಾರವಾಡದಲ್ಲಿ ಸ್ಥಾಪನೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘ.

ಅಖಿಲ ಕರ್ನಾಟಕ ವ್ಯಾಪ್ತಿಯ ಮೊದಲ ಸಾಂಸ್ಕೃತಿಕ ಸಂಸ್ಥೆಯಾದ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಯ ಸನ್ನಿವೇಶವಂತೂ ದೇಶದಾದ್ಯಂತ ಬ್ರಿಟಿಷ್ ರಾಜಸತ್ತೆಯ ವಿರೋಧವಾದ ವಿಚಾರಗಳು ಅದೇ ಆಗ ಹರಳುಗಟ್ಟುತ್ತಿದ್ದ ಹೊತ್ತು. ಹಾಗೆಯೇ ತಮ್ಮತನ, ತಮ್ಮ ಭಾಷೆ, ಸಂಸ್ಕೃತಿಗಳ ಪರವಾಗಿಯೂ ವೈಚಾರಿಕತೆ ಮೊಳಕೆಯೊಡೆಯುತ್ತಿದ್ದ ಸಮಯ. ಧಾರವಾಡದ್ದು ಸದಾಕಾಲ `ಧಾರವಾಡ ದಾರಿ ತೋರಿತು’ ಎಂಬಂತೆ ಚರಿತ್ರೆಯ ಪುಟಗಳಲ್ಲಿ ದಾಖಲಾದ ಕೀರ್ತಿ ! ಆ ಸಂಕ್ರಮಣ ಸ್ಥಿತಿಯಲ್ಲಿ ಧಾರವಾಡ `ಕರ್ನಾಟಕ ವಿದ್ಯಾವರ್ಧಕ ಸಂಘ’ದ ಹುಟ್ಟಿಗೆ ಕಾರಣವಾಗಿ ಮುಂದೆ ಒಂದು ಶತಮಾನದ ಕಾಲ ಕನ್ನಡ, ಕನ್ನಡಿಗ, ಕರ್ನಾಟಕದ ವಿಷಯಗಳಲ್ಲಿ ಐತಿಹಾಸಿಕ ಪಾತ್ರ ನಿರ್ವಹಿಸಿ ಕರ್ನಾಟಕದ ಇತಿಹಾಸದಲ್ಲಿ ಮಹತ್ವಪೂರ್ಣ ಅಧ್ಯಯವಾಗುಳಿದಿದೆ.

ನೂರಾ ಮೂವತ್ತೆರಡನೆಯ ವರ್ಷಕ್ಕೆ ಕಾಲಿಟ್ಟಿರುವ ಕರ್ನಾಟಕ ವಿದ್ಯಾವರ್ಧಕ ಸಂಘದ ಸ್ಥಾಪನೆಗೆ ಮೂಲ ಪ್ರೇರಕರು ಶ್ರೀ ರಾ. ಹ. ದೇಶಪಾಂಡೆಯವರು. ಆ ಕಾಲದಲ್ಲಿ ಕನ್ನಡಿಗರಲ್ಲಿಯೇ ಪ್ರಥಮ ಎಂ.ಎ. ಪದವೀಧರರೆಂಬ ಕೀರ್ತಿಗೆ ಪಾತ್ರರಾಗಿದ್ದ ರಾ. ಹ. ದೇಶಪಾಂಡೆ ಶಿಕ್ಷಣ ಇಲಾಖೆಯಲ್ಲಿ ಸೇವೆ ಸಲ್ಲಿಸಿದವರು. ಉತ್ತಮ ಲೇಖಕರೂ, ಸಂಘಟಕರೂ ಆಗಿದ್ದ ರಾ. ಹ. ದೇಶಪಾಂಡೆ ಸಂಘದ ಸಂಸ್ಥಾಪಕ ಕಾರ್ಯದರ್ಶಿಯಾಗಿ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಉಪಾಧ್ಯಕ್ಷರಾಗಿ ಸಂಘದ ಸರ್ವತೋಮುಖ ಏಳ್ಗೆಗೆ ಶ್ರಮಿಸಿದವರು.

ಕಾರವಾರ ಜಿಲ್ಲೆಯ ಮುರ್ಡೇಶ್ವರದ ಶ್ಯಾಮರಾವ್ ಕೈಕಿಣಿ ಸುಪ್ರಸಿದ್ಧ ವಕೀಲರು, ಮುಂಬೈನಲ್ಲಿ ಕರ್ನಾಟಕ ಮುದ್ರಣಾಲಯ ಸ್ಥಾಪಿಸಿ ಕನ್ನಡ ಪುಸ್ತಕಗಳ ಪ್ರಕಟಣೆಗೆ ಕಾರಣರಾದವರು ಪ್ರಥಮ ಅಧ್ಯಕ್ಷರಾಗಿದ್ದರೆ, ಹೊಸಗನ್ನಡದ ಗದ್ಯ ಪ್ರವರ್ತಕರಲ್ಲೊಬ್ಬರಾಗಿದ್ದ ವೆಂಕಟ ರಂಗೋ ಕಟ್ಟಿ ಉಪಾಧ್ಯಕ್ಷರಾಗಿದ್ದರು. ಕನ್ನಡಿಗರ ಅಪರೋಕ್ಷ ಶಾಸನ ಸಭೆಯೆಂದು ಬಣ್ಣಿಸಲ್ಪಟ್ಟ ಐತಿಹಾಸಿಕ ಕರ್ನಾಟಕ ವಿದ್ಯಾವರ್ಧದ ಸಂಘದ ಮೊದಲ ಕಾರ್ಯಕಾರಿ ಸಮಿತಿಯಲ್ಲಿ ಶ್ರೀ ಗುರುಸಿದ್ಧಪ್ಪ ಗಿಲಗಂಚಿ, ಶ್ರೀ ರೊದ್ದ ಶ್ರೀನಿವಾಸರಾಯರು, ಶ್ರೀ ರಾಮರಾವ್ ದೇಸಾಯಿ, ಶ್ರೀ ಶಾಂತವೀರಪ್ಪ ಮೆಣಸಿನಕಾಯಿ, ಶ್ರೀ ಶೇಷಗಿರಿರಾವ್ ಕುಪ್ಪೀಕರ, ಶ್ರೀ ಗುರಾಚಾರ್ಯ ಮೊರಬ ಹಾಗೂ ಶ್ರೀ ಧೋಂಡೋ ನರಸಿಂಹ ಮುಳಬಾಗಿಲರಂತಹ ಆ ಕಾಲದ ಅಗ್ರಮಾನ್ಯ ಗಣ್ಯರಿದ್ದರು.

ಬೆಳವಣಿಗೆ

೧೯೦೫ ರಲ್ಲಿ ಅಂದಿನ ಜಿಲ್ಲಾಧಿಕಾರಿ ಗಿಬ್ಸ್ ರಿಂದ ನಿವೇಶನ ಪಡೆದು ಮೈಸೂರು ಮಹಾರಾಜರು, ವಂಟಮೂರಿ, ಶಿರಸಂಗಿ ದೇಸಾಯರಿಂದ, ಸಾರ್ವಜನಿಕರಿಂದ ಆರ್ಥಿಕ ಸಹಾಯ ಪಡೆದು ಕಟ್ಟಲ್ಪಟ್ಟ ಚಾಮರಾಜ ಮಂದಿರವೆಂಬ ಕಟ್ಟಡ ಕನ್ನಡಿಗರ ಹೃದಯದೇಗುಲವೆಂಬಂತೆಯೇ ಉಳಿದು ಬೆಳೆಯಿತು. ಕನ್ನಡವನ್ನು ಬೆಳೆಸಿತು.

ಕನ್ನಡಕ್ಕಾಗಿ ದುಡಿದ ವಿದೇಶಿಯರಾದ ಆರ್.ಎಪ್. ಝಿಗ್ಲರ್, ರೆವರಂಡ್ ಎಫ್. ಕಿಟೆಲ್, ಬಿ.ಎಲ್. ರೈಸ್, ಜಾನ್ ಫ್ಲಿಟ್ ಮೊದಲಾದ ಕ್ರಿಶ್ಚಿಯನ್ ಮಿಶನರಿಗಳು ಗೌರವ ಸದಸ್ಯರಾಗಿಯೂ, ಬಿ.ಎಂ.ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್, ಆಲೂರು ವೆಂಕಟರಾಯರು, ಮುದವೀಡು ಕೃಷ್ಣರಾವ್, ಎ. ಆರ್. ಕೃಷ್ಣಶಾಸ್ತ್ರಿ, ಮಧುರ ಚೆನ್ನ, ಕಡಂಗೋಡ್ಲು ಶಂಕರಭಟ್ಟರಂಥ ಪ್ರಮುಖ ಸದಸ್ಯರ ಸಮರ್ಥ ಸಾರಥ್ಯದೊಂದಿಗೆ ಕನ್ನಡಕ್ಕಾಗಿ ಕಾರ್ಯ ಆರಂಭಿಸಿದ ಕರ್ನಾಟಕ ವಿದ್ಯಾವರ್ಧಕ ಸಂಘ, ಕರ್ನಾಟಕ ಏಕೀಕರಣದ ಪ್ರಮುಖ ಚೈತನ್ಯ ಶಕ್ತಿ ! ಭಾರತದ ಭೂಪಟದಲ್ಲಿ ಅಖಂಡ ಕರ್ನಾಟಕದ ನಕ್ಷೆ ಮೂಡಲು ಮೂಲ ಕಾರಣವಾದ ಸಂಘವು ಜನ್ಮ ತಳೆದ ಪ್ರಾಥಮಿಕ ಹಂತದಿಂದ ಹಿಡಿದು ಇಂದಿನವರೆಗೆ ಕನ್ನಡ ಭಾಷೆಯ ಅಸ್ತಿತ್ವಕ್ಕೆ ರಾಜಕೀಯ ಸಂಕಲ್ಪ ಮೂಡಲು ಕಾರಣವಾದ ಹೋರಾಟಗಳಿಗೆ  ತಾಯಿ ಬೇರು.

ಸ್ತ್ರೀವಾದವೆಂಬುದು ಚರ್ಚೆಯಾಗುವ ಮೊದಲೇ ಲೇಖಕಿಯರಿಗಾಗಿ ೧೯೭೭ ರಲ್ಲಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿನಿಧಿ ಬಹುಮಾನ ಘೋಷಿಸುವ ಮೂಲಕ ಮಹಿಳಾ ಸಾಹಿತ್ಯ ಪ್ರೋತ್ಸಾಹಿಸಿ ಬೆಳೆಸಿದ ಹೆಗ್ಗಳಿಕೆ ಕರ್ನಾಟಕ ವಿದ್ಯಾವರ್ಧಕ ಸಂಘದ್ದು. ಈ ದತ್ತಿ ಸ್ಪರ್ಧೆಯಿಂದ ನೂರಾ ಮೂವತ್ತೆರಡಕ್ಕೂ ಹೆಚ್ಚು ಲೇಖಕಿಯರು ಮನ್ನಣೆಗೆ ಪಾತ್ರರಾಗಿದ್ದಾರೆ. ಆ ಕಾರಣದಿಂದಾಗಿ ಕನ್ನಡ ಸಾಹಿತ್ಯದಲ್ಲಿ ಮಾತೋಶ್ರೀ ರತ್ನಮ್ಮ ಹೆಗ್ಗಡೆ ದತ್ತಿ ನಿಧಿಗೆ ವಿಶಿಷ್ಟ ಸ್ಥಾನ ದಕ್ಕಿದೆ.

ನೂರಾ ಮೂವತ್ತೆರಡು ವರ್ಷಗಳಲ್ಲಿ ಸಂಘವು ನೂರಕ್ಕೂ ಹೆಚ್ಚು ಪುಸ್ತಕ ಪ್ರಕಟಿಸಿದೆ. ೧೮೯೨ ರಲ್ಲಿ ಭವಭೂತಿಯ ಸಂಸ್ಕೃತ ನಾಟಕದ ಕನ್ನಡಾನುವಾದ ` ಉತ್ತರ ರಾಮ ಚರಿತೆ’ ಸಂಘದ ಮೊದಲ ಪ್ರಕಟಣೆಯಾಗಿ ಹೊರಬಂದಿತು. ನಂತರದ ಮಾಲವಿಕಾಗ್ನಿ ಮಿತ್ರ, ವೇಣಿ ಸಂಹಾರ, ಬಾಣ ಕಾದಂಬರಿ, ಶಬ್ದಾನುಶಾಸನ, ಕನ್ನಡದ ನೆಲ, ಕರ್ನಾಟಕ ಜನಜೀವನ ಮೊದಲಾದ ಮೌಲಿಕ ಕೃತಿಗಳು ಹೊರಬಂದವು. ಅಂದಿನ ಶಂ. ಬಾ. ಜೋಶಿ ಬೇಟಗೇರಿ ಕೃಷ್ನ ಶರ್ಮ, ಸ. ಸ. ಮಾಳವಾಡ, ಶಿ. ಶಿ. ಬಸವನಾಳ, ಚೆನ್ನವೀರ ಕಣವಿಯವರಿಂದ ಹಿಡಿದು ಲೇಖಕ ಮೋಹನ ನಾಗಮ್ಮನವರ ಸಂಪಾದಿಸಿದ `ಕಥನ ಕುತೂಹಲ’, `ಬಯಲ ಬೇರ ಚಿಗುರು,’ `ಸ್ವಾತಂತ್ರ್ಯ ಶರಣ್ಯರು,’ ಗ್ರಂಥ ಹಾಗೂ ಡಾ. ಬಸವರಾಜ ಸಾದರ ಸಂಪಾದಿಸಿದ `ಇಪ್ಪತ್ತನೆಯ ಶತಮಾನದ ಕನ್ನಡ ಸಾಹಿತ್ಯ ಘಟ್ಟಗಳು’ ಮತ್ತು ಪ್ರೊ. ಬಿ. ವ್ಹಿ. ಗುಂಜೆಟ್ಟಿ, ಪ್ರೊ. ಎಸ್. ಸಿ. ಹಿರೇಮಠ ಸಂಪಾದಿಸಿದ `ಕಾನೂನು ಪದವಿವರಣ ಕೋಶ’ ಬೃಹತ್ ಗ್ರಂಥ ಕವಿ. ಬಿ. ಎ. ಸನದಿ, ಪ್ರೊ. ಆರ್. ವ್ಹಿ. ಹೊರಡಿ ಅವರ `ಸುವರ್ಣ ಕರ್ನಾಟಕ ರಾಜಕೀಯ ಸಿಂಹಾವಲೋಕನ,’ ವೀಣಾ ಕುಲಕರ್ಣಿಯವರ `ಬೇಂದ್ರೆ-ಕಾಳಿದಾಸ : ಕಾವ್ಯಕಾರಣ’, ಶ್ರೀ ಅನಿಲ ದೇಸಾಯಿ ಸಂಪಾದಿತ ‘ಸಾಂಸ್ಕತಿಕ ಧೃವತಾರೆಗಳು, ಶ್ರೀ ಮೋಹನ ನಾಗಮ್ಮನವರ ಸಂಪಾದಿತ ‘ಕನ್ನಡ ದೀಪಗಳು’ ಹಾಗೂ ಶ್ರೀ ಮನೋಜ ಪಾಟೀಲ ಸಂಪಾದಿತ ‘ವಿಶ್ವಕ್ಕೆ ಬೆಳಕು ತೋರಿದವರು’ ಮತ್ತು ‘ವಿಜ್ಞಾನದ ನೂರೆಂಟು ಪ್ರಶ್ನೆಗಳು’ ಇವು ಸಂಘ ಪ್ರಕಟಿಸಿದ ಪುಸ್ತಕಗಳು ಹಲಬಗೆಯವು. ಕನ್ನಡ ಸಾಹಿತ್ಯಕ್ಕೆ ಕಾಣಿಕೆ ಸಲ್ಲಿಸಿದಂಥವು.

ಸ್ವಾತಂತ್ರ್ಯ ಪೂರ್ವ ಕಾಲದಲ್ಲಿ ಗ್ರಂಥ ಪ್ರಕಟಣೆಯೇ ಅಸಾಧ್ಯ ಎನ್ನುವ ಹಂತದಲ್ಲಿ ಪ್ರಕಟಣಾ ಕಾರ್ಯ ಕೈಗೆತ್ತಿಕೊಂಡಿದ್ದರಿಂದ ಮಹತ್ವದ ಪ್ರಕಟಣೆಗಳು ಹಸ್ತಪ್ರತಿ ರೂಪದಿಂದ ಪುಸ್ತಕ ರೂಪ ಪಡೆದವು. ಕೇವಲ ಗ್ರಂಥ ಪ್ರಕಟಣೆಯಲ್ಲದೆ ಭಾಷಣ ಸ್ಪರ್ಧೆ, ಸಾಹಿತ್ಯಿಕ ಪರೀಕ್ಷೆಗಳು, ಗಮಕ ವರ್ಗಗಳು, ಗ್ರಂಥಾಲಯಗಳ ಸಂಘ ರಚನೆ, ಗ್ರಂಥಕರ್ತರ ಸಮ್ಮೇಳನ, ಕನ್ನಡ ಸಾಹಿತ್ಯ ಪರಿಷತ್ತಿನ ರಚನೆಗೆ ಮಾರ್ಗದರ್ಶನ, ಗಡಿ ಕನ್ನಡಿಗರ ಹಿತರಕ್ಷಣೆಗೆ ಘರ್ಜನೆಗಳೆಲ್ಲ ಕರ್ನಾಟಕ ವಿದ್ಯಾವರ್ಧಕ ಸಂಘದ ಕೀರ್ತಿಯ ಮುಕುಟದಲ್ಲಿ ಮಿನುಗುತ್ತಿರುವ ಗರಿಗಳು.

ಸಂಘದ ಮುಖ ಪತ್ರವಾಗಿ ೧೮೯೬ ರಲ್ಲಿ ಹೊರಬಂದ `ವಾಗ್ಭೂಷಣ,’ ನಂತರದ ೨೩ ವರ್ಷಗಳ ಕಾಲ ಹಳಗನ್ನಡ ಗ್ರಂಥ ಸಂಶೋಧನ, ಪರಿಷ್ಕರಣ, ಹೊಸಗನ್ನಡದ ಹೊಸ ಸಾಹಿತ್ಯ ನಿರ್ಮಾಣಗಳಿಗೆ ಪ್ರೋತ್ಸಾಹ ನೀಡಿತು. ಧರ್ಮ, ಇತಿಹಾಸ, ಸಂಶೋಧನೆ, ವಿಜ್ಞಾನ, ಸಂಸ್ಕೃತಿ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಈ ಮಾಲಿಕೆಯಲ್ಲಿ ಹಲವಾರು ಪುಸ್ತಕಗಳು ಪ್ರಕಟಗೊಂಡವು.

ತನ್ನ ಮೊದಲ ಸಭೆಯಿಂದಲೇ ವಾಚನಾಲಯ, ಗ್ರಂಥ ಭಂಡಾರದ ಕಲ್ಪನೆ ಹೊಂದಿ ಗ್ರಂಥ ಸಂಗ್ರಹ ಮಾಡುವ ಮೂಲಕ ೧೯೪೦ ರಲ್ಲಿ ಶಾಂತೇಶ ವಾಚನಾಲಯವೆಂದು ವಿಸ್ತರಿಸಲ್ಪಟ್ಟಿತು. ಮುಂಬೈ ಸರಕಾರವು ಕನ್ನಡ ಪ್ರಾದೇಶಿಕ ಗ್ರಂಥಾಲಯವನ್ನು ಪ್ರಾರಂಭಿಸಬಯಸಿದ ಅಂದಿನ ಸಂದರ್ಭದಲ್ಲಿ ಎಲ್ಲ ಸಂಘ-ಸಂಸ್ಥೆಗಳೂ, ಪತ್ರಿಕೆಗಳೂ ಕರ್ನಾಟಕ ವಿದ್ಯಾವರ್ಧಕ ಸಂಘದ ಹೆಸರನ್ನೇ ಸೂಚಿಸಿದ್ದವು. ಅದು, ಆ ಕಾಲಕ್ಕೆ ಸಂಘದ ಹೆಸರಿಗಿದ್ದ ಮನ್ನಣೆಯನ್ನು ಸೂಚಿಸುತ್ತದೆ. ಇದೀಗ ರಾಜಾರಾಮ್ ಮೋಹನ ರಾಯ್ ಪ್ರತಿಷ್ಠಾನದ ನೆರವು ಹೊಂದಿ ಸುಸಜ್ಜಿತ ಪೀಠೋಪಕರಣ ಹಾಗೂ ವಿಶಾಲ ಓದಿಗೆ ನೆರವಾಗುವ ಗ್ರಂಥ ಭಂಡಾರವನ್ನು ಪಡೆದಿದೆ.

೧೯೨೬ ರಲ್ಲಿ ಡಾ. ದ. ರಾ. ಬೇಂದ್ರೆ, ಬೆಟಗೇರಿ ಕೃಷ್ಣ ಶರ್ಮರಿಂದ ಆರಂಭಗೊಂಡ ನಾಡಹಬ್ಬ ಕಾರ್ಯಕ್ರಮವು  ಇಂದಿನವರೆಗೂ ತಪ್ಪದಂತೆ ನಡೆಯುತ್ತ ಬಂದಿದೆ. ವಿಜಯದಶಮಿಯ ಈ ಕಾರ್ಯಕ್ರಮದಲ್ಲಿ ಸಾಹಿತ್ಯಗೋಷ್ಠಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುತ್ತ ಎಲ್ಲೆಡೆ ವಿಜಯದಶಮಿ ನಾಡಹಬ್ಬವೆಂದು ಸಾಂಸ್ಕೃತಿಕ ಮಹತ್ವ ಪಡೆದದ್ದು ಈ ಕಾರ್ಯಕ್ರಮದಿಂದಲೇ.

ವರ್ತಮಾನ

ಇಂದಿಗೂ ಯುವಜನ, ಕಾನೂನು, ವಿಜ್ಞಾನ, ಶಿಕ್ಷಣ, ಕಲೆ, ಮಹಿಳೆ, ಮಕ್ಕಳ, ಕಲಾ, ಜಾನಪದ ಮಂಟಪಗಳೆಂದು ಜ್ಞಾನದ ಎಲ್ಲ ಮಗ್ಗಲುಗಳನ್ನು ಮುಟ್ಟಿಲೆಳೆಸುವಂತೆ ಕಾರ್ಯಕ್ರಮ ರೂಢಿಸಿಕೊಂಡು ಸದಾಕಾಲ ಚಟುವಟಿಕೆಗಳನ್ನು ಹಮ್ಮಿಕೊಂಡು ಮುನ್ನಡೆಯುತ್ತಿರುವ

ಸಂಘದಲ್ಲಿ ೧೨೦ (ಒಂದನೂರಾ ಇಪ್ಪತ್ತು) ಜನ ಮಹನೀಯರ ಹೆಸರಿನಲ್ಲಿ ಇರಿಸಿದ ದತ್ತಿ ನಿಧಿಗಳ ಅಂಗವಾಗಿ ವರ್ಷದುದ್ದಕ್ಕೂ ವಿವಿಧ ಪ್ರಕಾರದ ಮೌಲಿಕವಾದ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ಆಡಳಿತದಲ್ಲಿ ಕನ್ನಡ ಅನುಷ್ಠಾನ ಹಾಗೂ ಶಿಕ್ಷಣದಲ್ಲಿ ಕನ್ನಡ ಮಾಧ್ಯಮಕ್ಕಾಗಿ ಆಗ್ರಹಿಸಿ ನಡೆದ ಎಂಭತ್ತರ ದಶದಕ ಐತಿಹಾಸಿಕ ಚಳುವಳಿಯಾದ ಗೋಕಾಕ ಚಳುವಳಿಯ ಪ್ರಮುಖ ಶಕ್ತಿ ಕೇಂದ್ರವಾಗಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘ, ಹುಬ್ಬಳ್ಳಿಯಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ, ಆಕಾಶವಾಣಿ ಕೇಂದ್ರ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾಲಯ ಸ್ಥಾಪನೆಗೆ ಪ್ರಾದೇಶಿಕ ಅಸಮತೋಲನದ ವಿರುದ್ದ ಡಾ. ಡಿ. ಎಂ. ನಂಜುಂಡಪ್ಪ ಸಮಿತಿ ರಚನೆಗೆ ಆಗ್ರಹಿಸಿ ಹೋರಾಟ ಮಾಡಿದೆ. ಕೆಲ ವರ್ಷದ ಹಿಂದೆ ಗೋವಾದಲ್ಲಿ ಕನ್ನಡಿಗರ ದುಃಸ್ಥಿತಿಯನ್ನು ಮನಗಂಡು ಅಲ್ಲಿಯೂ ಕೂಡ ಗೋವಾ ಕನ್ನಡಿಗರ ಸಮ್ಮೇಳನವನ್ನು ಸಂಘಟಿಸಿತು. ಮಾಯಾನಗರಿ ಮುಂಬಯಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘವು ಮುಂಬಯಿ ಕರ್ನಾಟಕ ಸಂಘದ ಸಂಯುಕ್ತಾಶ್ರಯದಲ್ಲಿ ಅಲ್ಲಿಯ ವಿವಿಧ ಕನ್ನಡ ಸಂಘ-ಸಂಸ್ಥೆಗಳ ಸಹಭಾಗಿತ್ವದಲ್ಲಿ ೨೦೦೨ ಮಾರ್ಚ ತಿಂಗಳಲ್ಲಿ ಒಂಭತ್ತು ದಿನಗಳ ಕಾಲ ಅತ್ಯಂತ ಸಂಭ್ರಮದಿಂದ ಕನ್ನಡ ಸಮ್ಮೇಳನ ಹಮ್ಮಿಕೊಂಡಿತ್ತು. ತಿಂಗಳ ನಾಟಕ ಮತ್ತು ರವಿವಾರದ ನಾಟಕ ಶಾಲೆಗಳೆಂಬ ಕಾರ್ಯಕ್ರಮಗಳ ಮೂಲಕ ರಂಗಭೂಮಿಯಡೆಗೂ ವಿಶೇಷ ಆಸಕ್ತಿ ವಹಿಸಿ ಕಾರ್ಯನಿರ್ವಹಿಸುತ್ತಿದೆ. ಇತ್ತೀಚೆಗೆ ಪಾಂಡಿಚೇರಿಯಲ್ಲಿ `ಪುದುಚೇರಿ ಕನ್ನಡಿಗರ ಸಮಾವೇಶ’ ನಡೆಸಿದೆ.

ಕರ್ನಾಟಕ ವಿದ್ಯಾವರ್ಧಕ ಸಂಘ ಹಲವಾರು ರಚನಾತ್ಮಕ ಕಾರ‍್ಯಕ್ರಮಗಳ ಜೊತೆಗೆ, ಸಮಗ್ರ ಕನ್ನಡಿಗರ ಸಮಸ್ಯೆಗಳಿಗೆ ಸ್ಪಂದಿಸುತ್ತಾ ಬಂದಿದೆ. ನಮ್ಮ ಕನ್ನಡಿಗರು ಭಾರತದ ಬೇರೆ ಬೇರೆ ರಾಜ್ಯಗಳಲ್ಲಿ ನೆಲೆಸಿ, ಕನ್ನಡ ಸಂಘಗಳನ್ನು ಕಟ್ಟಿಕೊಂಡು ಕನ್ನಡದ ಕೆಲಸ ಮಾಡುತ್ತಿದ್ದಾರೆ. ಆ ಸಂಘಗಳೊಂದಿಗೆ ನಿಕಟ ಸಂಬಂಧ ಇರಿಸಿಕೊಂಡು ಬಂದಿದೆ. ಯಾಕೆಂದರೆ, ಅವರು ಕರ್ನಾಟಕದ ರಾಯಭಾರಿಗಳಂತೆ ಕೆಲಸ ಮಾಡುತ್ತಿದ್ದಾರೆ. ಈ ದಿಸೆಯಲ್ಲಿ ಸಂಘವು ಕಳೆದ ವರ್ಷ ಮೇ ೩೦ ಹಾಗೂ ೩೧ ರಂದು ಧಾರವಾಡದಲ್ಲಿ “ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ಮೊದಲನೇ ಮಹಾಮೇಳ’’ವನ್ನು ಕರ್ನಾಟಕ ಸರಕಾರದ ಸಹಕಾರದಿಂದ ಅಭೂತಪೂರ್ವ ಯಶಸ್ವಿನಿಂದ ಆಚರಿಸಿತು.

ಅದರಂತೆ ೨೫ ಹಾಗೂ ೨೬ ಫೆಬ್ರುವರಿ ೨೦೧೨ ರಂದು “ಅಖಿಲ ಭಾರತ ಹೊರನಾಡ ಕನ್ನಡ ಸಂಘಗಳ ೨ ನೇ ಮಹಾಮೇಳ’’ ವನ್ನು ಕಾಶಿ ವಾರಣಾಸಿಯಲ್ಲಿ ಮತ್ತು ೯ ಹಾಗೂ ೧೦, ೨೦೧೩ ಫೆಬ್ರುವರಿಯಲ್ಲಿ ೩ನೇ ಮಹಾಮೇಳ ಡೊಂಬಿವಲಿ (ಮುಂಬೈಯಲ್ಲಿ), ೮ ಹಾಗೂ ೯ ಡಿಸೆಂಬರ ೨೦೧೩ ರಂದು ೪ ನೇ ಮಹಾಮೇಳ ಗುಜರಾತ ರಾಜ್ಯದ ವಡೋದರಾದಲ್ಲಿ, ೨೪ ಹಾಗೂ ೨೫ ಜನೇವರಿ ೨೦೧೫ ರಂದು ೫ನೇ ಮಹಾಮೇಳ ದೆಹಲಿಯಲ್ಲಿ, ೧೩ ಹಾಗೂ ೧೪ ಫೆಬ್ರುವರಿ ೨೦೧೬ ರಂದು ೬ನೇ ಮಹಾಮೇಳವನ್ನು ಅಮರಕಂಟಕ (ಮಧ್ಯಪ್ರದೇಶ) ದಲ್ಲಿ, ೮ ಹಾಗೂ ೯ ಏಪ್ರಿಲ್ ೨೦೧೭ ೭ ನೇ ಮಹಾಮೇಳ ಹೈದರಾಬಾದ ಹಾಗೂ ೨೧ ಮತ್ತು ೨೨ ನೇ ಡಿಸೆಂಬರ್ ೨೦೧೯ ರಂದು ಅಕ್ಕಲಕೋಟ (ಮಹಾರಾಷ್ಟ್ರ) ದಲ್ಲಿ  ಯಶಸ್ವಿಯಾಗಿ ಆಯೋಜಿಸಿದ ಕೀರ್ತಿಗೆ ಭಾಜನವಾಗಿದೆ.

ಕರ್ನಾಟಕ ವಿದ್ಯಾವರ್ಧಕ ಸಂಘದ ಶತಮಾನದ ಇತಿಹಾಸ ಕುರಿತು ಶ್ರೀಮತಿ ಜಯಶ್ರೀ ವಿ. ಕಾರೇಕರ ಅವರು `ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ – ಒಂದು ಅಧ್ಯಯನ’ ವಿಷಯ ಕುರಿತು ಎಂ.ಫಿಲ್ ಮತ್ತು ಶ್ರೀ ವಿ. ಸಿ. ಸಪ್ತಾಳಕರ ಅವರು `ಕರ್ನಾಟಕ ವಿದ್ಯಾವರ್ಧಕ ಸಂಘ : ಬೆಳವಣಿಗೆಯ ಒಂದು ವಿಶ್ಲೇಷಣೆ’ ವಿಷಯ ಕುರಿತು ಎಂ.ಫಿಲ್ ಮತ್ತು `ಕರ್ನಾಟಕ ಸಂಸ್ಕೃತಿಗೆ ಕರ್ನಾಟಕ ವಿದ್ಯಾವರ್ಧಕ ಸಂಘದ ಕೊಡುಗೆ’ ವಿಷಯ ಕುರಿತು ಪಿ.ಎಚ್.ಡಿ ಪ್ರಬಂಧ ಮಂಡಿಸಿದ್ದಾರೆ. ಕನ್ನಡಕ್ಕೆ, ಕನ್ನಡಿಗರಿಗೆ, ಕರ್ನಾಟಕತ್ವಕ್ಕೆ ಕುತ್ತೊದಗಿದಾಗೆಲ್ಲ ಆಡಳಿತ ನಡೆಸುವ ರಾಜಕೀಯ ಗುತ್ತಿಗೆದಾರರ ಗದ್ದುಗೆಯನ್ನಲ್ಲಾಡಿಸುವ ಕಾರ್ಯದಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಸದಾಕಾಲ ಮುಂದು !

ಕರ್ನಾಟಕದ ಸಾಕ್ಷಿ ಪ್ರಜ್ಞೆಯಂತಿರುವ ನಾಡೋಜ ಡಾ. ಪಾಟೀಲ ಪುಟ್ಪಪ್ಪನವರ ಐವತ್ತೆರಡು(೫೨) ವರ್ಷಗಳ ಸಮರ್ಥ ಅಧ್ಯಕ್ಷತೆಯಲ್ಲಿ ಮುನ್ನಡೆದ ಕರ್ನಾಟಕ ವಿದ್ಯಾವರ್ಧಕ ಸಂಘ, ಸದಾಕಾಲ ಸ್ವಾವಲಂಬಿಯಾಗಿ ಚಟುವಟಿಕೆಯಲ್ಲಿ ರೂಢಿಸಿಕೊಳ್ಳಲು ಸಂಪನ್ಮೂಲವೆಂದು ವಾಣಿಜ್ಯ ಸಂಕೀರ್ಣ ಹೊಂದಿದೆ. ಸಮರ್ಪಕವಾಗಿ ಸಾಹಿತ್ಯಿಕ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಘಟಿಸಲು ಸಭಾಭವನ ಹೊಂದುವ ಸಂಘದ ಶತಮಾನದ ಕನಸು ಈಡೇರಿ ಶತಮಾನೋತ್ಸವ ಸವಿನೆನಪಿಗೆ ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಭಾಭವನ ೧೧ ಮಾರ್ಚ, ೨೦೦೦ ರಂದು ಉದ್ಘಾಟನೆಗೊಂಡಿದೆ.

ಕನ್ನಡ-ಕನ್ನಡಿಗ-ಕರ್ನಾಟಕ ಎನ್ನುವ ಮಂತ್ರವನ್ನು ತನ್ನ ಧ್ಯೇಯವನ್ನಾಗಿಸಿಕೊಂಡು ಸಂಘವು ಮುಂಬರುವ  ವರ್ಷಗಳಲ್ಲಿ ಇನ್ನೂ ಹೆಚ್ಚು ವ್ಯಾಪಕವಾಗಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ರಚನಾತ್ಮಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಭವಿಷ್ಯದ ಭವ್ಯ, ಸಮೃದ್ಧ ನವಕರ್ನಾಟಕ ನಿರ್ಮಾಣದತ್ತ ಮುನ್ನಡೆದಿದೆ.

ಸಂಘದ ಮುನ್ನೋಟ :

 

೧.       “ಪಿ.ಎಚ್.ಡಿ. ಸಂಶೋಧನಾ ಕೇಂದ್ರ’’ ಪ್ರಾರಂಭಿಸುವದು.(ಪ್ರಾರಂಭಿಸಿದೆ)

೨.       `ವಾಗ್ಭೂಷಣ’ ಹೆಸರಿನಲ್ಲಿದ್ದ ಸಂಘದ ಮುಖವಾಣಿಯನ್ನು ಪುನಃ ಹೊರತರುವದು.

೩.       ಬಿ.ಎಂ.ಶ್ರೀ ಅವರ `ಕನ್ನಡ ಮಾತು ತಲೆ ಎತ್ತುವ ಬಗೆ’ ಸಾರ್ವಜನಿಕ ಭಾಷಣದ ಶತಮಾನೋತ್ಸವ ಆಚರಣೆ.

೪.       ಗ್ರಾಮೀಣ ಜನಪದ ಕಲೆ ಸಂವರ್ಧನೆಗಾಗಿ `ರವಿವಾರ ಮಕ್ಕಳ ದೊಡ್ಡಾಟ ಶಾಲೆ’ ಪ್ರಾರಂಭಿಸವದು.

೫.       `ತಿಂಗಳ ನಾಟಕ’ ಎಂಬ ಯೋಜನೆಯ ಮೂಲಕ ಕಲೆ, ಕಲಾವಿದರಿಗೆ ಪ್ರೋತ್ಸಾಹ ನೀಡುವ ದಿಸೆಯಲ್ಲಿ ಪ್ರತಿ ತಿಂಗಳು ಒಂದು ನಾಟಕ ಅಯ್ಕೆ ಮಾಡಿ ಪ್ರದರ್ಶನ ಅವಕಾಶ ನೀಡುತ್ತಿದೆ.

ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆ-2018

ಸಂಘವು ದಿನಾಂಕ 3-7-2018 ರಂದು ಆಯೋಜಿಸಿದ್ದ ಸಂತ ಶಿಶುನಾಳ ಶರೀಫರ ಜಯಂತಿ ಆಚರಣೆ-2018 ಮತ್ತು ಶರೀಫರ ತತ್ವಪದಗಳ ಗಾಯನ ಕಾರ್ಯಕ್ರಮ ವಿವರ ಮತ್ತು ಫೋಟೋ   ಕರ್ನಾಟಕ...